ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ ಶುರುವಾಗಿದೆ. ಬೆಟ್ಟಕ್ಕೆ ಪ್ರತಿ ಆಷಾಢ ಶುಕ್ರವಾರದಂದು ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಅಂತೆಯೇ ಈ ಬಾರಿಯೂ ಖಾಸಗಿ ಬಸ್ಗಳಿಗೆ ನಿರ್ಬಂಧ ವಿಧಿಸಿದ್ದು, ಸರ್ಕಾರಿ ಬಸ್ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಷಾಢ ಪೂಜಾ ಕೈಂಕರ್ಯಗಳು ಜೋರಾಗಿ ನಡೆಯುತ್ತಿವೆ.
ಆಷಾಢ ಶುಕ್ರವಾರ ಬಂದ್ರೆ ಸಾಕು ಅರಮನೆ ನಗರಿ ಮೈಸೂರು ಹಾಗೂ ಚಾಮುಂಡಿ ಭಕ್ತರಿಗೆ ಸಂಭ್ರಮವೋ ಸಂಭ್ರಮ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ನಾಡದೇವತೆ, ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಮುಂಜಾನೆಯೇ 3 ಗಂಟೆ 30 ನಿಮಿಷಕ್ಕೆ ಅಭಿಷೇಕದೊಂದಿಗೆ ಆರಂಭವಾಗಿರುವ ವಿವಿಧ ರೀತಿಯ ಪೂಜಾ ಕೈಂಕರ್ಯ ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆದಿದೆ. ದೇವಿಗೆ ಲಕ್ಷ್ಮೀ ಅಲಂಕಾರ ಮಾಡಿ ಬಳಿಕ 5 ಗಂಟೆ 30 ನಿಮಿಷಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.